ಪೋವಿಸ್, ಲೆವೆಲಿನ್  	1884-1939 : ಪ್ರಬಂಧಕಾರ ಮತ್ತು ಕಾದಂಬರಿಕಾರ. ಹುಟ್ಟಿದ್ದು ಇಂಗ್ಲೆಂಡಿನ ಡಾರ್ಸೆಟ್ ಪ್ರಾಂತ್ಯದ ಡಾರ್ಚೆಸ್ಟರ್‍ನಲ್ಲಿ. ಶಿಕ್ಷಣ ಶೆರ್‍ಬಾರ್ನ್ ಮತ್ತು ಕೇಂಬ್ರಿಜ್‍ಗಳಲ್ಲಿ. ಪೋವಿಸ್ ಸೋದರರೆಂದು ಪ್ರಖ್ಯಾತರಾಗಿರುವ ಜಾನ್ ಕಾಪರ್ ಪೋವಿಸ್, ತಿಯೋಡರ್ ಫ್ರಾನ್ಸಿಸ್ ಪೋವಿಸ್ ಈತನ ಹಿರಿಯ ಸಹೋದರರು. 1909ರಲ್ಲಿ ಈತ ಅಮೆರಿಕಕ್ಕೆ ಭೇಟಿ ಕೊಟ್ಟು ಅಲ್ಲಿ ಉಪನ್ಯಾಸಗಳನ್ನು ನೀಡಿದ. ತನ್ನ ಆರೋಗ್ಯದ ದೃಷ್ಟಿಯಿಂದ 1914 ರಿಂದ 1919 ರವರೆಗೆ ಆಫ್ರಿಕದ ಕೀನ್ಯದಲ್ಲಿ ನಿಂತು ಪಶುಪಾಲನ ಕ್ಷೇತ್ರವೊಂದರ ವ್ಯವಸ್ಥಾಪಕನಾಗಿ ದುಡಿದ. ಆರೋಗ್ಯ ಸುಧಾರಿಸಿದ ಮೇಲೆ 1920ರಲ್ಲಿ ನ್ಯೂಯಾರ್ಕಿಗೆ ಹಿಂದಿರುಗಿ 1920 ರಿಂದ 1925ರವರೆಗೆ ಪತ್ರಕರ್ತನಾಗಿ ದುಡಿದ. ಅಲ್ಲಿಯೇ ಆಲೈಸ್ ಗ್ರೆಗೋರಿ ಎಂಬಾಕೆಯನ್ನು ಮದುವೆಯಾದ. 1925ರಲ್ಲಿ ತನ್ನ ಅಮೆರಿಕನ್ ಪತ್ನಿಯೊಂದಿಗೆ ಡಾರ್ಸೆಟ್‍ಗೆ ಹಿಂದಿರುಗಿದ. ಆಗಿಂದಾಗ್ಗೆ ವಿದೇಶ ಪ್ರವಾಸ ಮಾಡುತ್ತಿದ್ದು ಈತ 1928ರಲ್ಲಿ ಪ್ಯಾಲೆಸ್ಟೀನಿಗೂ 1930ರಲ್ಲಿ ವೆಸ್ಟ್ ಇಂಡೀಸ್‍ಗೂ ಭೇಟಿ ನೀಡಿದ. ತನ್ನ ಬಾಳಿನ ಕೊನೆಯ ದಿನಗಳನ್ನು ಈತ ಸ್ವಿಟ್ಜರ್‍ರ್ಲೆಂಡಿನಲ್ಲಿ ಕಳೆದ. 1939ರಲ್ಲಿ ಕ್ಷಯ ರೋಗದಿಂದಾಗಿ ಕೊನೆಯುಸಿರೆಳೆದ. 

ಕೀನ್ಯದಲ್ಲಿನ ಅನುಭವ ಸಾಹಿತ್ಯಿಕವಾಗಿ ಈತನಿಗೆ ತುಂಬ ಉಪಯೋಗಕ್ಕೆ ಬಂದಿತು ಎಬೊನಿ ಆಂಡ್ ಐವರಿ (1922) : ಬ್ಲಾಕ್ ಲಾಫ್ಟರ್ (1924) ಈ ಅನುಭವಗಳ ಆಧಾರದ ಮೇಲೆ ರಚಿತವಾಗಿರುವ ಕಥೆಗಳ ಮತ್ತು ರೇಖಾಚಿತ್ರಗಳ ಪುಸ್ತಕಗಳು. ದಿ ಕ್ರ್ಯಾಡ್ಲ್ ಆಫ್ ಗಾಡ್ (1929); ಇಂಪ್ಯಾಷನ್ಡ್ ಕ್ಲೇ (1931); ಗ್ಲೋರಿ ಆಫ್ ಲೈಫ್ (1934); ಡಾರ್ಸೆಟ್ ಎಸ್ಸೇಸ್ (1936)- ಇವು ಈತನ ಪ್ರಬಂಧ ಸಂಕಲನಗಳು. ಆ ಆ್ಯಪಲ್ಸ್ ಬಿ ರೈಪ್ (1930) ಎಂಬುದು ಈತನ ಕಾದಂಬರಿ. ಕನ್‍ಫೆಶನ್ಸ್ ಆಫ್ ಟೂ ಬ್ರದರ್ಸ್ (1916) ಎಂಬುದು ತನ್ನ ಅಣ್ಣ ಜಾನ್ ಕಾಪರ್‍ನೊಂದಿಗೆ ಸೇರಿ ರಚಿಸಿದ ಕೃತಿ. ದಿ ವರ್ಡಿಕ್ಟ್ ಆಫ್ ಬ್ರೈಡ್ಲ್ ಗೂಸ್ ಎಂಬುದು ಅಮೆರಿಕದ ಬಗೆಗಿನ ಈತನ ಅನಿಸಿಕೆಗಳನ್ನು ಒಳಗೊಂಡಿರುವ ಗ್ರಂಥ. ಲವ್ ಅಂಡ್ ಡೆತ್ (1941) ಕಾಲ್ಪನಿಕ ಆತ್ಮಕಥೆ. ಸ್ಕಿನ್ ಫಾರ್ ಸ್ಕಿನ್ (1925) ಮತ್ತು ಎ ಪೇಗನ್ಸ್ ಪಿಲಗ್ರಿಮೇಜ್ (1931) ಈತನ ಇತರ ಪ್ರಸಿದ್ಧ ಕೃತಿಗಳು.

ಬೇಕರ್ಸ್ ಡಜನ್ (1941); ಸ್ವಿಸ್ ಎಸ್ಸೇಸ್ (1946). ಅಡ್ವೈಸ್ ಟು ಎ ಯಂಗ್ ಪೊಯೆಟ್ - ಇವು ಮರಣೋತ್ತರ ಪ್ರಕಟವಾದ ಕೃತಿಗಳು.
(ಪಿ.ಜಿ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ